
ಎಲ್ಲವೂ ಅಳಿದುಹೋದಂತಿರುವ ಭೀಕರ ಬರಗಾಲದಲ್ಲಿ ಕೇವಲ ಇಬ್ಬರು ವ್ಯಕ್ತಿಗಳು ಮಾತ್ರ ಬದುಕುಳಿದಿದ್ದಾರೆ! ಇಂಥ ವಿಷಣ್ಣತೆಯ ಸಂದರ್ಭ ಹಾಗೂ ಬೈಬಲ್ ಹೇಳುವ ‘ನಿನ್ನನ್ನು ನೀನು ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವನನ್ನು ಪ್ರೀತಿಸು’ ಎನ್ನುವ ಒಂದು ಸೂಕ್ತಿಯನ್ನು ಅಂಡರ್‌ಕರೆಂಟ್ ಆಗಿಟ್ಟುಕೊಂಡು, ಬರಗಾಲದಲ್ಲಿ ಬದುಕುಳಿದ ಮತ್ತಾಯ ಮತ್ತು ಯೊಹಾನ್ನ ಎಂಬ ಇಬ್ಬರು ವ್ಯಕ್ತಿಗಳ ಮನೋಜ್ಞ ಕಥನ ನಿರೂಪಿಸುವ “ಮತ್ತಾಯ” ಒಂದು ಹೃದಯಸ್ಪರ್ಶಿ ರಂಗ ಪ್ರಯತ್ನ. ಈ ಕಥೆಯಲ್ಲೇನು ಮಣ್ಣಂಗಟ್ಟಿ ಇಲ್ಲ ಎಂದುಕೊಂಡರೆ ಅದೊಂದು ಶುಷ್ಕ ಭಾವನೆ ಅಷ್ಟೇ.
ಕಥೆ ಇಷ್ಟೇ- ಬರಗಾಲದಲ್ಲಿ ಬದುಕುಳಿದ ಮತ್ತಾಯನ ಬಳಿ ಆಹಾರ ಸಾಮಗ್ರಿ ಇರುವುದರಿಂದ ಉಣ್ಣಲು ವ್ಯವಸ್ಥೆ ಇದೆ. ಆದರೆ ನೆರೆಮನೆಯ ಯೊಹಾನ್ನಗೆ ಅದಿಲ್ಲ. ಹೀಗಾಗಿ ಆತ ಮತ್ತಾಯನ ಅನ್ನದಲ್ಲಿ ತನ್ನ ಪಾಲು ಪಡೆದು ಹೊಟ್ಟೆ ಹೊರೆಯಬೇಕು. ಇದು ಪರಿಸ್ಥಿತಿ. ಪರಸ್ಪರ ಕಾಲೆಳೆಯುವ, ತಮಾಷೆ ಮಾಡುವ ಏನೇನೋ ಕನಸುಗಳ ಕಟ್ಟಿಕೊಂಡು ಆಟ ಆಡಿಕೊಂಡಿದ್ದ ಇಬ್ಬರಲ್ಲಿ ಸಣ್ಣ ಏಕತಾನದ ಅಥವಾ ಕಿತ್ತಾಟ ಅಥವಾ ಅಸಮಧಾನದ ಭಾವ. ಮತ್ತಾಯನಿಗೆ ಏಕತಾನತೆ ಹೊಟ್ಟೆ ಉರಿಸುತ್ತದೆ. ಯೊಹಾನ್ನನಿಗೆ ತನ್ನ ಮನೆಯೊಳಕ್ಕೆ ಪ್ರವೇಶ ನೀಡದಿರಲು, ಆತನೊಂದಿಗೆ ಅನ್ನದ ತಟ್ಟೆಯಲ್ಲಿ ತುತ್ತು ಹಂಚಿಕೊಳ್ಳದಿರಲು ನಿರ್ಧರಿಸುತ್ತಾನೆ. ಇದು ಯೋಹಾನ್ನನ ಆತ್ಮಸಮ್ಮಾನಕ್ಕೆ ನೀಡುವ ಏಟು. ಊಟದ ಸಮಯಕ್ಕೆ ಸರಿಯಾಗಿ ವಕ್ಕರಿಸುವ ಯೊಹಾನ್ನ ಒಮ್ಮೆ ಯಾಕೋ ಕಾಣಿಸುವುದಿಲ್ಲ. ‘ಅನ್ನದ ತಟ್ಟೆಯಲ್ಲಿ ತುತ್ತನ್ನು ಹಂಚಿ ಉಣಲು ಜೊತೆಗಾರನಿಲ್ಲ. ಅನ್ನವಿದೆ ಆದರೆ ಅದರಿಂದ ರುಚಿಯೇ ಎದ್ದು ಹೋದಂತೆ, ಹಸಿವು ಬಾಯಿ ಕಟ್ಟಿಸಿದಂತೆ..’ ಮತ್ತಾಯನಿಗೆ ಎಂಥದೋ ಸಂಕಟ ಕಾಡುತ್ತದೆ. ತಾನು ತಪ್ಪು ಮಾಡಿದೆನೆ ಎನ್ನುವ ಪಶ್ಚಾತ್ತಾಪ, ಯಾತನೆಗೆ ಆತ ಸಮಾಧಾನ ಕಂಡುಕೊಳ್ಳಲು ಹೊರಟರೆ ಕಂಡಿದ್ದು ಯೊಹಾನ್ನನ ನಿರ್ಜೀವ ದೇಹ!
‘ಚಿಕನ್ ಸೂಪ್ ಫಾರ್ ಮೆನ್ ಸೋಲ್’, ‘ಚಿಕನ್ ಸೂಪ್ ಫಾರ್ ವಿಮೆನ್ ಸೋಲ್’ ಎನ್ನುವ ಪುಸ್ತಕಗಳಲ್ಲಿ ಬರುವ ಪುಟ್ಟ ಕಥೆಗಳ ಹಾಗೆ ಇದೊಂದು ಕೇವಲ ಆತ್ಮಮರುಕದ ಪ್ರಯತ್ನವಾಗಿ ಕಾಣಿಸುವುದಿಲ್ಲ. ಈ ಪ್ರಯೋಗ ಕೇವಲ ಕಥನ ನಿರೂಪಣೆ ಮಾತ್ರವೇ? ಖಂಡಿತ ಅಲ್ಲ. ಇಲ್ಲಿ ಪ್ರಯೋಗದ ಪ್ರತಿಯೊಂದು ಘಟನೆ, ಪಾತ್ರಗಳ ಚಟುವಟಿಕೆ ಅವುಗಳ ನಡುವಿನ ಸಾಂಗತ್ಯ, ಚಟುವಟಿಕೆ ಎಲ್ಲವೂ ನಮ್ಮದೇ ಮನೋರಂಗದ ಹಾಗೆ ಅನ್ನಿಸುವಂತೆ ವಸ್ತು ನಿಧಾನಕ್ಕೆ ನಮ್ಮ ಅನುಭವಗಳಿಗೆ ದಕ್ಕುತ್ತಾ ಹೋಗುತ್ತದೆ.
ಮತ್ತಾಯ ಮತ್ತು ಯೊಹಾನ್ನ ಪಾತ್ರಗಳೆರಡು ಒಂದು ಕಥಾನಕ ಕಟ್ಟಿಕೊಡಲು ನಡೆಸುವ ಪ್ರಯತ್ನಗಳನ್ನು ಕಲ್ಪನೆ ಅಂದುಕೊಳ್ಳಿ ಅಥವಾ ಮನುಷ್ಯರಿಬ್ಬರ ಅಸಹಾಯಕತೆ ಅಥವಾ ಏಕಾಂಗಿತನ ಮರೆಯಲು ಇಬ್ಬರು ಹೂಡುವ ಆಟ ಎಂದುಕೊಳ್ಳಿ. ಆದರೆ ಪ್ರಯೋಗದಲ್ಲಿ ಇದೊಂದು ಹೃದಯ ಹಿಂಡುವ ಆಟ. 'ಹುಡುಗಾಟಾನೂ ಆಟನ, ಹೊಡೆದಾಟನೂ ಆಟನ..' ಎನ್ನುವ ಚಂಪಾ ಅವರ ಅಸಂಗತ ನಾಟಕದ ಸಾಲಿನ ಹಾಗೆ ವಾಸ್ತವದಲ್ಲಿ ಬದುಕು ಕೂಡ ಒಂದು ಆಟ ಅಲ್ಲವೇ?
ಪ್ರಯೋಗದ ಪ್ರತಿ ಹಂತದಲ್ಲಿ ಕಥೆಯೊಳಗಿನ ಫಿಲಾಸಫಿಕಲ್ ಜರ್ನಿ ನಮ್ಮೊಳಕ್ಕೂ ಹಬ್ಬುತ್ತಿರುವಂತೆ ಭಾಸವಾಗುತ್ತದೆ. ಕಥಾವಸ್ತುವಿನ ಜೊತೆ ನಮ್ಮನ್ನು ತಲ್ಲೀಣಗೊಳಿಸುತ್ತದೆ. ನಮ್ಮನ್ನು ನಾವು ಕಂಡುಕೊಳ್ಳುವ ಬಹುದೊಡ್ಡ ಉಪಾಯ ಎಂದರೆ ಎದುರಿನವರನ್ನು ಅಥವಾ ಸಹಮಾನವರನ್ನು ಪ್ರೀತಿಯಿಂದ ಕಾಣುವುದು. ನಮ್ಮನ್ನು ನಾವು ಪ್ರೀತಿಸುವುದು ಕೂಡ ಸಾಧ್ಯ ಎಂದಾದರೆ ಅದು ಪ್ರೀತಿಯ ಮಹತ್ವ ಅರಿತಾಗಲೇ ಅಲ್ಲವೇ? ಪ್ರೀತಿಯ ಮಹತ್ವ, ಅರಿವು ಪ್ರೀತಿಸಲ್ಪಡುವುದರಲ್ಲಿಲ್ಲ ಪ್ರೀತಿಸುವುದರಲ್ಲಿದೆ. ನಮ್ಮ ಮನಸಿಗೆ ಸಾಂಗತ್ಯ ಬೇಕು ಅದು ಅನಾಥವಾಗಿರಲು ಬಯಸುವುದಿಲ್ಲ. ಮನಸು ಯಾವತ್ತೂ ಬೆರೆಯುವುದಕ್ಕೆ ಹಾತೊರೆಯುತ್ತದೆ. ಸ್ನೇಹ ಅದಕ್ಕೆ ಅಗತ್ಯ ಸೇತುವೆ. ಸ್ನೇಹ ಚುಂಬಕದ ಹಾಗೆ ತಕ್ಷಣ ಮನಸುಗಳ ಜಂಟಿಯಾಗಿಸುತ್ತದೆ. ನಮಗೆ ಹೆಚ್ಚು ಖುಷಿಯಾದರೆ ಯಾರನ್ನು ನಾವು ಹೆಚ್ಚು ಪ್ರೀತಿಸುತ್ತೇವೊ ಅವರೊಂದಿಗೆ ಹಂಚಿಕೊಳ್ಳುತ್ತೇವೆ. ಹೆಚ್ಚು ದುಃಖ, ನೋವು ಅಥವಾ ಸಂಕಷ್ಟ ಬಂದಾಗ ನಮ್ಮನ್ನು ಯಾರು ಹೆಚ್ಚು ಇಷ್ಟಪಡ್ತಾರೊ ಅವರ ಬಳಿ ಹೋಗುತ್ತೇವೆ. ನೋವು ಮತ್ತು ಸಂಕಷ್ಟಗಳನ್ನು ಪರಸ್ಪರ ಹಂಚಿಕೊಳ್ಳುವುದಾದರೆ ಬದುಕು ಸಾರ್ಥಕತೆ ಪಡೆಯಲು ಸಾಧ್ಯ ಎನ್ನುವ ಸಹಜದ ಧರ್ಮವನ್ನು ಮನದಟ್ಟಾಗಿಸುವ ಇಂಥ ಪ್ರಯತ್ನವೇ ಅರ್ಥಪೂರ್ಣ.
‘ಮತ್ತಾಯ’ ವಸ್ತು ನಿರೂಪಿಸಲು ನಿರ್ದೇಶಕ ಅರುಣ್ ಲಾಲ್ ಆಯ್ದುಕೊಂಡ ಅಥವಾ ಅನುಸರಿಸಿದ ರಂಗವಿಧಾನ ಹೊಸದೇನಲ್ಲ. ಬಳಸಿದ ರಂಗಪರಿಕರ ಇಟ್ಟಿಗೆಗಳು, ಒಂದು ಮರದ ತುಂಡು ಮತ್ತು ಯೊಹಾನ್ನನ ಜೋಪಡಿ ಸಾಂಕೇತಿಸುವ ಒಣಮರದಿಂದಾಗಿ ರಂಗವಿನ್ಯಾಸ ಸಿಂಪ್ಲಿ ಧ್ವನಿಪೂರ್ಣವಾಗಿದೆ. ಇಲ್ಲಿ ಇಟ್ಟಿಗೆಗಳು ಅಕ್ಕಿ ಹರವಿ, ಅನ್ನದ ಪಾತ್ರೆ, ಒಲೆ, ಉಣ್ಣುವ ತಟ್ಟೆ, ನೀರ ಬಾವಿ, ಬಕೆಟ್ ಇತ್ಯಾದಿ ಭೌತಿಕ ವಸ್ತುಗಳು ಮಾತ್ರವಲ್ಲ ಅವು ಜೀವಂತ ಪಾತ್ರಗಳಾಗುತ್ತವೆ. ಕೋಳಿಗಳು! ಇಲ್ಲಿ ಮಣ್ಣಿನಿಂದ ಮಾಡಿದ ಇಟ್ಟಿಗೆ ಮನುಷ್ಯನದೇ ಬಂಧ, ಸಂಬಂಧಗಳ ಅದ್ಭುತ ರೂಪಕ. ಇಟ್ಟಿಗೆ ಹಾಗೆ ಸುಮ್ಮನೆ ಬಿಸಾಡುವುದಕ್ಕಲ್ಲ ಮನೆ, ನಿವಾಸಕ್ಕೆ ಅಗತ್ಯ ವಸ್ತು. ಬಿದ್ದರೆ ಹೋಳಾಗುವ, ಪುಡಿ ಪುಡಿ ಆಗುವ ಹಾಗೆ ಮನುಷ್ಯ ಬದುಕು ಕೂಡ ತನ್ನದೇ ತಪ್ಪು ನಡೆಗಳಿಂದ ಛಿದ್ರವಾಗಿರುವುದನ್ನು ಆಗಾಗ ಬಿಸಾಡಲ್ಪಡುವ ಇಟ್ಟಿಗೆಗಳು ಗಟ್ಟಿಯಾಗಿ ಧ್ವನಿಸುತ್ತವೆ. ಹಾಗೆಯೇ ಕಥಾವಸ್ತುವಿನ ವಿಷಣ್ಣ ಸ್ಥಿತಿಯ ಬರಗಾಲ ಭೂಮಿಗಲ್ಲ, ಮನುಷ್ಯರೊಳಗಿನ ಭಾವನೆಗಳಿಗೆ ಬರಗಾಲ ಎನ್ನುವುದನ್ನು ಒತ್ತಿ ಹೇಳುತ್ತವೆ. ಭೂಮಿಯ ಒಂದು ಭಾಗದಲ್ಲಿ ಬರ ಬಿದ್ದರೆ ಮತ್ತೊಂದು ಭಾಗದಲ್ಲಿ ಸಮೃದ್ಧಿ! ಬರ ನಿಸರ್ಗ ನಮಗೆ ಕೊಡುವ ಎಚ್ಚರಿಕೆ ಅಷ್ಟೇ. ಬರಗಾಲದಲ್ಲಿ ಜೀವಸೆಲೆ ಬತ್ತದಂತೆ ನೋಡಿಕೊಳ್ಳುವುದು ಏನು? ಪರಸ್ಪರ ಕಾರುಣ್ಯ ಅಲ್ಲವೇ? ವಾಸ್ತವದಲ್ಲಿ ನಮ್ಮ ಒಳಗಿನ ಒರತೆಯಲ್ಲಿ ಜೀವ ಕಾರುಣ್ಯ ಬತ್ತಿ ಹೋಗುತ್ತಿದೆೆ. ಅಳಿದುಳಿದ ಪಸೆಯಲ್ಲಿ ಸ್ವಾರ್ಥ ಹೆಚ್ಚಿದೆ. ಬದಲಾಗುವ ಆಸೆ ಇನ್ನೂ ಉಸಿರಾಡುವುದರಿಂದ ಪಸೆ ಉಳಿದುಕೊಂಡಿದೆ ಎನ್ನಿಸುತ್ತದೆ. ಅದು ಆರುವ ಮುನ್ನ ಅದರ ಮಹತ್ವ ಅರಿಯಬೇಕಲ್ಲವೇ? ಅರಿಯದೊಡೆ ಅಕಾಲ ಸಮಾಧಿಗೆ ಸಿದ್ಧವಾಗಬೇಕು ಅಷ್ಟೇ. ಒಂದು ಸಮಾಧಿಯ ಚಿತ್ರಣದೊಂದಿಗೆ ಮುಕ್ತಾಯವಾಗುವ ‘ಮತ್ತಾಯ’ ಹೇಳುವುದು ಇದನ್ನೇ.
ಮತ್ತಾಯನಾಗಿ ಫರ್ನಾಂಡಿಸ್ ಮತ್ತು ಯೊಹನ್ನನಾಗಿ ಕುಮಾರ್ ಲಾಲ್ ಊರ್ಫ ಲಾಲ್‌ಸಾಬ್ ನದಾಫ್ ಅವರುಗಳ ಮನೋಜ್ಞ ಅಭಿನಯದ ಒಟ್ಟಾರೆ ಪ್ರಯೋಗ ಪ್ರೇಕ್ಷಕರನ್ನು ತಪ್ತಗೊಳಿಸಿದ್ದು ಅದರ ತಲ್ಲೀಣಗೊಳಿಸುವ ರಂಗತಂತ್ರದಿಂದ ಎನ್ನಬಹುದು. ಒಂದು ನಿರ್ಧಿಷ್ಟವಲ್ಲದ ಸ್ಥಳದಲ್ಲಿ ನಡೆಯುವ ಕಥೆಯನ್ನು ನಿರೂಪಿಸಲು ಒಟ್ಟಾರೆ ನೆಲವೆನ್ನುವುದನ್ನೇ ಕ್ಯಾನ್ವಾಸ್ ಆಗಿಸಿ ಮನುಷ್ಯ ಮನುಷ್ಯರ ನಡುವೆ ಮತ್ತು ನಾವು ಬದುಕುವ ಮಣ್ಣಿನ ಜೊತೆಗಿನ ನಂಟಿನ (ಇಟ್ಟಿಗೆಗಳ ಮೂಲಕ) ವಾಸ್ತವ ಹೇಳುವ ಪ್ರಯತ್ನ ಮತಾಯ್ ವಸ್ತು. ಕ್ರೆೈಸ್ತ ತತ್ವಾದರ್ಶದ ಬೈಬಲ್‌ನ ಒಂದು ಸೂಕ್ತಿಯನ್ನು ಜೀವದ್ರವ್ಯವಾಗಿಸಿಕೊಂಡು ಅನುಭವಕ್ಕೆ ದಕ್ಕುವಂತೆ ರಂಗಪ್ರಯೋಗ ಕಟ್ಟಿಕೊಡುವ ರೀತಿ ಮತ್ತು ನಿರೂಪಣೆ ರೂಪಕಾತ್ಮಕ.
-ದಿಲಾವರ ರಾಮದುರ್ಗ
(ಸಿಜಿಕೆ -75 ಸಮಾರೋಪ ಪ್ರಯುಕ್ತ ರಂಗ ನಿರಂತರ ಬೆಂಗಳೂರು, ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ ರಂಗಪ್ರಯೋಗ)
We use cookies to analyze website traffic and optimize your website experience. By accepting our use of cookies, your data will be aggregated with all other user data.